ವಿಷಯಕ್ಕೆ ಹೋಗಿ

ಯಾರೀ ಲೇಖಕರು?

ನ ಸೂರ್ಯನಾರಾಯಣ
ನ. ಸೂರ್ಯನಾರಾಯಣ
 
ಬಿಳಿ ಖಾದಿ ಶರ್ಟು, ಕರಿ ಪ್ಯಾಂಟು, ದಪ್ಪ ಕನ್ನಡಕ, ತಲೆಯ ಮೇಲೆ ಅಲ್ಲೊಂದು ಇಲ್ಲೊಂದು ನಾಲ್ಕಾರು ಕೂದಲುಗಳು. ನಗು ಮೊಗದ ಸೌಮ್ಯ ಸ್ವಭಾವದವರು. ವೃತ್ತಿ ಉದ್ಯೋಗ ವಿನಿಮಯ ಕೇಂದ್ರದಲ್ಲಿ. ಸೇರಿದ್ದು ಒಬ್ಬ ಮೇಲ್ದರ್ಜೆಯ ಗುಮಾಸ್ತನಾಗಿ, ನಿವೃತ್ತಿ ಹೊಂದಿದ್ದು ಒಬ್ಬ ಅಧಿಕಾರಿಯಾಗಿ. ಸರ್ಕಾರಿ ಹುದ್ದೆಯಲ್ಲಿರುವಂತಹ ಎಂತವರಿಗಾದರೂ ವರ್ಗಾವಣೆಗಳೆಂದರೆ ಅಲರ್ಜಿ. ಆದರೆ ಅದೇ ವರ್ಗಾವಣೆಗಳು ಇವರಿಗೆ ಹಲವಾರು ಹವ್ಯಾಸಗಳನ್ನು ಬೆಳೆಸುಕೊಳ್ಳುವಲ್ಲಿ ಸಹಕಾರಿಯಾಗಿದೆ. ಶಾಸ್ತ್ರೀಯ ಸಂಗೀತ, ರಂಗಭೂಮಿ, ಬರವಣಿಗೆ ಇವರ ಪ್ರಮುಖ ಆಸಕ್ತಿಯ ವಿಷಯಗಳು. 
 
ಕರ್ನಾಟಕದ ಉದ್ದಗಲಕ್ಕೂ ಇರುವ ಹಲವಾರು ಜಿಲ್ಲೆಗಳಲ್ಲಿ ಕೆಲಸ ಮಾಡಿರುವ ಇವರು, ಅಲ್ಲಿನ ಭಾಷೆ, ಜನರ ನಡೆ, ನುಡಿ, ವೇಷ ಭೂಷಣಗಳಿಂದ ಸ್ಪೂರ್ತಿಗೊಂಡು, ನೈಜ ಘಟನೆಗಳನ್ನು ತಮ್ಮದೇ ಶೈಲಿಯ ಹಾಸ್ಯ ಮಿಶ್ರಿತ ರೋಚಕ ಕಥೆಗಳರೂಪದಲ್ಲಿ ಪೋಣಿಸಿದರು. ಇವರ ಹಲವಾರು ಕಥೆಗಳು ಅಂದಿನ ಕಸ್ತೂರಿ, ತರಂಗಿಣಿ ಮುಂತಾದ ಹೆಸರಾಂತ ವಾರಪತ್ರಿಕೆ, ಮಾಸಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. 

ಇವರು ಬರೆದಿರುವ ನಾಟಕ "ರಾಣಿ ಲಲಿತಾಂಗಿ" ಬೆಂಗಳೂರು, ಮೈಸೂರು ಹಾಗೂ ಭದ್ರಾವತಿಯ ಆಕಾಶವಾಣಿ ಕೇಂದ್ರಗಳಿಂದ ಹಲವಾರು ಬಾರಿ ಪ್ರಸಾರಗೊಂಡಿವೆ. 

ಇವರೇ ನಮ್ಮ ಪ್ರೀತಿಯ ಸೂರಿ ತಾತ. ನಮ್ಮ ಸೂರಿನಡಿಯಲ್ಲಿ ಕೂತು ನಮ್ಮ ಸೂರಿ ತಾತ ಹೇಳಿರುವ ಸುಂದರ ಕಥೆಗಳನ್ನು ಕೇಳುವ ಅನುಭವ ನಮಗಾಗಿದೆ. ಆ ಅನುಭವವನ್ನು ನೀವೂ ಪಡೆಯಬೇಕೆಂಬ ಆಶಯದಿಂದ ಈ ಹೊತ್ತಿಗೆಯನ್ನು ನಿಮಗೆ ನಮ್ಮ ಸೂರಿನಡಿಯ ಕಥೆಗಳು ರೂಪದಲ್ಲಿ ಪರಿಚಯಿಸುತ್ತಿದ್ದೇವೆ. 

ಈ ಕೃತಿ ನಿಮ್ಮನ್ನು ಹೆಚ್ಚು ಕನ್ನಡ ಸಾಹಿತ್ಯ ಓದುವ ಹವ್ಯಾಸಕ್ಕೆ ಸ್ಫೂರ್ತಿದಾಯಕವಾಗಿ, ನಿಮ್ಮಿಂದಲೂ ಸುಂದರ ಕೃತಿಗಳು ಮೂಡಿಬರುವಂತಾಗಲಿ ಎನ್ನುವುದು ನಮ್ಮ ಆಶಯ. 

ಈ ಪುಸ್ತಕದೊಳಕ್ಕೆ ಇಣಿಕಿ ನೋಡಲು ಇಲ್ಲಿ ಕ್ಲಿಕ್ಕಿಸಿ